ಕಾರ್ಯಪ್ಪ, ಕೆ ಎಂ

1900

. ಸ್ವತಂತ್ರ ಭಾರತ ಸೈನ್ಯದ ಪ್ರಥಮ ಭಾರತೀಯ ಕಮಾಂಡರ್-ಇನ್-ಚೀಫ್. ತಂದೆ ಕೊಡಂದೆರ ಮಾದಪ್ಪನವರು, ತಾಯಿ ಕಾವೇರಿ, ಜನನ ಕೊಡಗು ಜಿಲ್ಲೆಯಲ್ಲಿ 1900ನೆಯ ಜನವರಿ 28ರಂದು. ವಿದ್ಯಾಭ್ಯಾಸ ನಡೆದದ್ದು ಮಡಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ ಮತ್ತು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ. ಸೈನ್ಯದಲ್ಲಿ ಸೇವೆ ಸಲ್ಲಿಸಲು ಆಕರ್ಷಿತರಾದ ಕಾರ್ಯಪ್ಪನವರಿಗೆ ಸೈನ್ಯದ ಕಮಿಷನ್ ದೊರೆತಾಗ ಆ ಹಿರಿಮೆ ಗಳಸಿದ ಪ್ರಥಮ ಭಾರತೀಯರು ಇವರೇ ಆಗಿದ್ದರು (ಡಿಸೆಂಬರ್ 1919). ಸೈನ್ಯದ ಶಿಕ್ಷಣಾನಂತರ ಮೊದಲು 2/88 ಕರ್ಣಾಟಕ ರೆಜಿಮೆಂಟ್ ಅನಂತರ 2-125ನೆಯ ನೇಪಿಯರ್ ರೈಫಲ್ಸ್ ದಳದಲ್ಲಿ ಅಡ್ಜುಟೆಂಟ್ ಆಗಿ (1920-22) ಕೆಲಸ ಮಾಡಿದರು. 1920-22ರಲ್ಲಿ ಮೆಸಪೊಟೇಮಿಯ (ಈಗಿನ ಇರಾನ್) ದಳ, 1922-23ರಲ್ಲಿ 37 ಡೋಗ್ರಾ ಮತ್ತು 1923-42ರಲ್ಲಿ 1-7ನೆಯ ರಾಜಪುತ್ರ ದಳಗಳಲ್ಲಿದ್ದರು. ವಿವಿಧ ದೇಶಗಳಲ್ಲಿನ ಸೈನ್ಯಧಿಕಾರಿಗಳ ಶಿಕ್ಷಣವಿಧಾನ, ಜೀವನಕ್ರಮ ಮುಂತಾದವುನ್ನು ಅಭ್ಯಸಿಸುವ ಉದ್ದೇಶದಿಂದ ಕಾರ್ಯಪ್ಪನವರು ಸ್ವತಃ ಪ್ರಪಂಚ ಪರ್ಯಟನೆಯನ್ನು 1925ರಲ್ಲಿ ಕೈಗೊಂಡರು. ಆಗ ಅವರು ಚೀನ ಜಪಾನ್, ಸಂಯುಕ್ತರಾಷ್ಟ್ರ, ಕೆನಡ, ಗ್ರೇಟ್‍ಬ್ರಿಟನ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಸ್ವಿಟ್‍ಜಿರ್ಲೆಂಡ್, ಇಟಲಿ ಮುಂತಾದ ದೇಶಗಳನ್ನು ಸಂದರ್ಶಿಸಿದರು. 1922-30ರ ಅವಧಿಯಲ್ಲಿ ಅನೇಕ ಸಲ ವಜೀರಿಸ್ತಾನದಲ್ಲಿ (ವಾಯವ್ಯಗಡಿಪ್ರಾಂತ್ಯ) ಸೇವೆಸಲ್ಲಿದ್ದರು. ಕ್ವಾಟ್ಟ ಸ್ಟಾಫ್ ಕಾಲೇಜಿನಲ್ಲಿ ಫ್ರೌಢಸೈನ್ಯ ಶಿಕ್ಷಣ ಪಡೆಯಲು ಪ್ರವೇಶಿಸಿದ (1933) ಪ್ರಥಮ ಭಾರತೀಯರು ಇವರೇ. ಸಿಂಗಪುರದ ನೌಕೆ ಹಾಗು ವಿಮಾನ ನೆಲೆಗಳಪರೀಕ್ಷಾ ಸಂದರ್ಶನ ನಡೆಸಿದ್ದು 1935ರಲ್ಲಿ. ಎರಡೆನೆಯ ಮಹಾಯುದ್ದದಲ್ಲಿ 19ನೆಯ ಇಂಡಿಯನ್ ಡಿವಿಷನ್ ಪಡೆಯೊಡನೆ ಸೇವೆ ಸಲ್ಲಿಸುತ್ತ ಇರಾಕ್, ಸಿರಿಯ ಮತ್ತು ಇರಾನುಗಳಲ್ಲಿ ಯುದ್ದರಂಗ ಪ್ರವೇಶ ಮಾಡಿದರು. 7ನೆಯ ರಾಜಪುತ್ರ ರೆಜಿಮಿಂಟಿನ ಮೆಷೀನ್‍ಗನ್ ಪಡೆಯನ್ನು ರಚಿಸಲು ಹೊಣೆ ಕಾರ್ಯಪ್ಪನವ ರದ್ದಾಯಿತು (1942). 1943-44ರಲ್ಲಿ ಇವರು ಮೊದಲು ಈಸ್ಟರ್ನ್‍ಕಮಾಂಡ್ ಆಮೇಲೆ 26ನೆಯ ಡಿವಿಷನ್ನಿನ ಅಸಿಸ್ಟಂಟ್ ಕ್ವಾರ್ಟರ್ ಮಾಸ್ಟರ್ ಜನರಲ್ ಆಗಿದ್ದರು. ಅದೇ ಅವಧಿಯಲ್ಲಿ ಬರ್ಮ ಯುದ್ದದಲ್ಲಿ ಅರಕಾನ್ ರಂಗ ಪ್ರವೇಶಮಾಡಿ ಯುದ್ದತಂತ್ರ ನಿರ್ದೇಶನ ಮಾಡಿದರು. ಸೈನ್ಯ ಪುನವ್ರ್ಯವಸ್ಥಾ ಸಮಿತಿಯ (ಆರ್ಮಿ ರೀಆರ್ಗನೈಸೇಷನ್ ಕಮಿಟಿ) ಸದಸ್ಯರಾಗಿ 1944ರಲ್ಲಿ ನೇಮಕಗೊಂಡರು. ಮತ್ತು ಅದೇ ವೇಳೆ ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡಾಗಳ ಪರ್ಯಟನೆ ಕೈಗೊಂಡು ವೆಸ್ಟ್‍ಪಾಯಿಂಟ್ ಎಂಬಲ್ಲಿನ ಮಿಲಿಟೆರಿ ಅಕೆಡಮಿಯನ್ನು ಸಂದರ್ಶಿಸಿದರು. ಫ್ರಾಂಟಿಯರ್ ಬ್ರಿಗೇಡ್ ಗ್ರೂಪ್ ಎಂಬ ಸೈನ್ಯವಿಭಾಗದ ಅಧಪತಿಯಾಗಿ ಕಾರ್ಯಪ್ಪನವರು ನೇಮಕಗೊಂಡದ್ದು 1946ರಲ್ಲಿ. 1947ರಲ್ಲಿ ಇಂಪೀರಯಲ್ ಡಿಫೆನ್ಸ್ ಕಾಲೇಜನಲ್ಲಿ ಉನ್ನತ ಸೈನ್ಯ ಶಿಕ್ಷಣ ಪಡೆಯಲು ಆಯ್ಕೆಗೊಂಡರು. ಭಾರತ ಸ್ವತಂತ್ರರಾಷ್ಟ್ರವಾದ ವರ್ಷ ಇವರಿಗೆ ಹೊಸ ಹೊಣೆಗಾರಿಕೆಗಳು ಕಾದಿದ್ದುವು. ಸೈನ್ಯಬಲಗಳ ಪುನರ್ಘಟನಾಸಮಿತಿಯ (ಆಮ್ರ್ಡ್ ಫೋರ್ಸಸ್ ರೀಕಾನ್ಸ್ಟಿಟ್ಯೂಷನ್ ಕಮಿಟಿ) ಸದಸ್ಯತ್ವ ಜೂನ್ 1947ರಲ್ಲೂ ಮೇಜರ್ ಜನರಲ್ ಎಂಬ ದರ್ಜೆ ಸಮೇತ ಚೀಫ್ ಆಫ್ ದಿ ಜನರಲ್ ಸ್ಟಾಫ್ ಎಂಬ ಹುದ್ದೆ ಮುಂದಿನ ಆಗಸ್ಟ್ 15ರಲ್ಲೂ ಕಾರ್ಯಪ್ಪನವರಿಗೆ ಪ್ರಾಪ್ತವಾದುವು. ಮುಂದೆ ಏರಿದ ಸೋಪಾನಗಳು ಸಂಕ್ಷೇಪವಾಗಿ ಇಷ್ಟು: ಭಾರತ ಪೂರ್ವಸೇನಾವಲಯದ (ಈಸ್ಟರ್ನ್‍ಕಮಾಂಡ್) ಜನರಲ್-ಆಫೀಸರ್-ಕಮಾಂಡಿಂಗ್-ಇನ್-ಚೀಫ್, ಪಶ್ಚಿಮ ಸೇನಾವಲಯದ ಜಿ-ಓ-ಸಿ-ಇನ್-ಸಿ. ಕಾಶ್ಮೀರಯುದ್ದದ (1948) ಪ್ರಥಮ ನಾಯಕ, ಜನರಲ್ ಎಂಬ ಅತ್ಯುನ್ನತ ದರ್ಜೆ ಸಮೇತ ಸೈನ್ಯದ ವರಿಷ್ಠಾಧಿಕಾರಿ (ಜನವರಿ 15, 1949). ಸೈನ್ಯದ ವರಿಷ್ಠಾಧಿಕಾರಿಯಾಗಿ ಜನರಲ್ ಕಾರ್ಯಪ್ಪನವರು ಸೇವೆ ಸಲ್ಲಿಸಿದ್ದು ಜನವರಿ 15, 1953ರ ವರಗೆ. ಈ ನಾಲ್ಕು ವರ್ಷಗಳ ಅವಧಿ ದೇಶದ ಇತಿಹಾಸದಲ್ಲಿ ಹೇಗೋ ಹಾಗೆ ಸೈನ್ಯದ ಇತಿಹಾಸದಲ್ಲೂ ಒಂದು ಪರ್ವಕಾಲ. ಅದುವರೆಗೆ ಆಳರಸರ ಪಡೆಗಳಾಗಿದ್ದಂಥ ಸೈನ್ಯ ಸ್ವತಂತ್ರ ಭಾರತದ ಹೆಮ್ಮ್ಮೆಯ ಪ್ರತೀಕವಾಗಿ ಮಾರ್ಪಟ್ಟದ್ದು, ಸೈನಿಕರ ಶಿಕ್ಷಣ ಜೀವನಕ್ರಮ ಆರ್ಥಿಕ ಸಲವತ್ತು ಸೇವಾವಧಿ ಮುಂತಾದ ಸಮಸ್ತ ಹಾಸುಹೊಕ್ಕುಗಳಲ್ಲಿಯೂ ಗಮನಾರ್ಹ ಸುಧಾರಣೆಗಳಾದದ್ದು, ರಾಷ್ಟ್ರದ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥವಾದ ರಕ್ಷಣಾ ವ್ಯವಸ್ಥೆಯ ರಚನೆಯ ನಾಂದಿಯಾದದ್ದು ಜನರಲ್ ಕಾರ್ಯಪ್ಪನವರ ಹಿರಿತನದಲ್ಲಿ. ರಾಷ್ಟ್ರಕ್ಕೆ ಸೈನ್ಯದ ಶಿಸ್ತಿನ ಮತ್ತು ಸುಭದ್ರತೆಯ ಪ್ರತೀಕವೂ ಸೈನಿಕರಿಗೆ ಸಹಾನುಭೂತಿಪರ ದಕ್ಷತೆಯ ಪ್ರತೀಕವೂ ಆಗಿದ್ದ ಜನರಲ್ ಕಾರ್ಯಪ್ಪನವರ ಸೇವೆ ಸ್ವತಂತ್ರ ಭಾರತದ ಸೈನ್ಯಕ್ಕೆ ಒಂದು ಹೊಸ ಪರಂಪರೆಯನ್ನು ಒದಗಿಸಿತು.

1953ರ ಜುಲೈ ತಿಂಗಳಿನಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಜೀಲೆಂಡುಗಳಿಗೆ ಭಾರತದ ಹೈ ಕಮಿಷನರ್ ಆಗಿ ಜನರಲ್ ಕಾರ್ಯಪ್ಪನವರು ನೇಮಕಗೊಡರು. ಏಪ್ರಿಲ್ 1956ರ ವರೆಗೂ ರಾಜಕುಶಲಿಯ ಈ ಹೊಸ ಹುದ್ದೆಯಲ್ಲಿ ಸಮರ್ಥವಾಗಿ ಸೇವೆ ಸಲ್ಲಿಸಿದರು. ಅಲ್ಲಿಂದೀಚೆಗೆ ಕಾರ್ಯಪ್ಪನವರು ತಮ್ಮ ಸಮಸ್ತ ಕಾಲವನ್ನೂ ಸಾರ್ವಜನಿಕ ಕಾರ್ಯಗಳಿಗೋಸ್ಕರ ಮುಡುಪಾಗಿಟ್ಟು ನಿರಂತರ ಕ್ರಿಯಾಶೀಲರಾಗಿದ್ದಾರೆ. ಅವರ ಗೌರವ ನಿರ್ದೇಶನ ಲಭಿಸುತಿರುವ ಕೆಲವು ಸಂಘ ಸಂಸ್ಥೆಗಳ ವಿವರ ಹೀಗಿದೆ: ಕೆಲವು ವರ್ಷ ಯೋಜನಾ ಆಯೋಗದ ರಾಷ್ಟ್ರೀಯ ಸಹಕಾರ ಸಲಹಾ ಸಮಿತಿಯ (ನ್ಯಾಷನಲ್ ಅಡ್ವೈಸರಿ ಕಮಿಟಿ ಆನ್ ಪ್ಲಾನಿಂಗ್) ಸದಸ್ಯ ; ಅಖಿಲ ಭಾರತ ಮಾಜಿಯೋಧರ ಸಂಘದ (ಆಲ್ ಇಂಡಿಯಾ ಎಕ್ಸ್ ಸರ್ವಿಸ್ ಮ್ಯಾನ್ಸ್ ಲೀಗ್) ಅಧ್ಯಕ್ಷ ; ಅಖಿಲ ಭಾರತ ಕ್ರೀಡಾ ಸಂಸ್ಥೆಯ (ಆಲ್ ಇಂಡಿಯಾ ಕೌನ್ಸಿಲ್ ಆಫ್ ಸ್ಟೋರ್ಟ್) ಅಧ್ಯಕ್ಷ, ಇತ್ಯಾದಿ.   

 (ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ